ಬರ್ನಾರ್, ಕ್ಲಾಡ್
1813-78. ಫ್ರಾನ್ಸಿನ ಶರೀರಕ್ರಿಯಾವಿಜ್ಞಾನಿ. ಜನನ ಸೇಂಟ್ ಜೂಲಿಯನ್, ರೋಹಿನ್. 12-7-1813; ಮರಣ ಪ್ಯಾರಿಸ್, 10-2-1878. ಹತ್ತೊಂಬತ್ತನೆಯ ಶತಮಾನದ ಪರಮ ಮೇಧಾವಿ ಶರೀರಕ್ರಿಯಾ ವಿಜ್ಞಾನಿಗಳ ಪೈಕಿ ಒಬ್ಬ. ಜೀರ್ಣಕ್ರಿಯೆಯಲ್ಲಿ ಮೇದೋಜೀರಕಾಂಗದ ಪಾತ್ರ, ಪ್ರಾಣಿಗಳಲ್ಲಿ ಸಕ್ಕರೆ ಗ್ಲೈಕೊಜೆನ್ ಎಂಬ ವಸ್ತುವಾಗಿ ಸಂಶ್ಲೇಷಿಸಲ್ಪಟ್ಟು ಸಂಗೃಹೀತವಾಗುವುದರಲ್ಲಿ ಮತ್ತು ಪುನಃ ಸಕ್ಕರೆಯಾಗಿ ವಿಶ್ಲೇಷಿತವಾಗುವುದರಲ್ಲಿ ಯಕೃತ್ತಿನ ಪಾತ್ರ, ಅಂಗಗಳಿಗೆ ರಕ್ತಪೂರೈಕೆ ನಿಯಂತ್ರಿಸುವ ನರಗಳು, ದಕ್ಷಿಣ ಅಮೆರಿಕ ಮೂಲವಾಸಿಗಳು ಬೇಟೆ ಸೌಲಭ್ಯಕ್ಕಾಗಿ ಬಾಣಗಳ ತುದಿಗೆ ಲೇಪಿಸುತ್ತಿದ್ದ ಕ್ಯುರಾರಿ ಎಂಬ ಪಾಷಾಣವಸ್ತುವಿನಿಂದಾಗುವ ದೈಹಿಕ ಪರಣಾಮಗಳು-ಇವುಗಳ ವಿಷಯವಾಗಿ ಮೂಲಭೂತ ಸಂಶೋಧನೆ ಮಾಡಿ ಪ್ರಸಿದ್ಧನಾದ. ಅಲ್ಲದೆ ಸಮಸ್ತ ಶರೀರಕ್ರಿಯೆಗಳೂ ಕೋಶಾವರಣ ದ್ರವದ (ಮಿಲಿಯೂ ಇಂಟೀರಿಯರ್-ಇಂಟರ್ನಲ್ ಎನ್‍ವೈರನ್‍ಮೆಂಟ್) ಸಮತೋಲ ಕಾಪಾಡುವುದಕ್ಕಾಗಿಯೇ ಜರಗುತ್ತವೆ ಎಂಬ ತತ್ತ್ವವನ್ನು ಪ್ರಪಥಮವಾಗಿ ಸಾರಿದ. ಅಂದಿನ ವಿಜ್ಞಾನಿಗಳ ಮನ್ನಣೆ ಪಡೆಯದ ಈ ತತ್ತ್ವ ವಾಸ್ತವವಾಗಿ ಎಷ್ಟು ಪ್ರಾಥಮಿಕ ಪ್ರಾಮುಖ್ಯ ಉಳ್ಳದ್ದು ಎಂಬುದು 70-80 ವರ್ಷಗಳು ಕಳೆದ ಮೇಲೆ ಮನದಟ್ಟಾಗಿ ಆವಾಗಿನಿಂದ ಶರೀರಕ್ರಿಯಾವಿಜ್ಞಾನದಲ್ಲಿ ಇದೊಂದು ಮೂಲಸಿದ್ಧಾಂತವೆಂದೇ ಪರಿಗಣಿಸಲ್ಪಡುತ್ತಿದೆ. ಶರೀರಕ್ರಿಯಾವಿಜ್ಞಾನದಲ್ಲಿ ಕ್ರಿಯೆಯ ನೆಲೆಯನ್ನು ತಿಳಿಯಲು ಅಂಗರಚನಾ ವಿಜ್ಞಾನ ಸಹಾಯಕವೆಂಬುದು ಬರ್ನಾರನ ಮೂಲಸೂತ್ರ. ಇದು ಇವನಿಗಿಂತ ಸುಮಾರು ಮೂರು ಶತಮಾನಗಳ ಹಿಂದೆ ಬದುಕಿದ್ದು ಪಾಶ್ಚಾತ್ಯ ವೈದ್ಯದಲ್ಲಿ ಶರೀರ ಕ್ರಿಯಾವಿಜ್ಞಾನಕ್ಕೆ ಫಿಸಿಯಾಲಜಿ ಎಂಬ ಹೆಸರನ್ನು ಸೃಷ್ಟಿಸಿದ ಪ್ರಸಿದ್ಧ ಜೀನ್ ಫೆರ್ನಲ್ (1497-1557) ಎಂಬಾತ ಅಂಗರಚನಾ ವಿಜ್ಞಾನ ಮತ್ತು ಶರೀರಕ್ರಿಯಾ ವಿಜ್ಞಾನ ಇವೆರಡರ ಸಂಬಂಧ ಚರಿತ್ರೆಗೂ ಭೂವಿವರಣೆಗೂ ಇರುವ ಸಂಬಂಧದಂತೆ ಎಂದು ಹೇಳಿರುವುದಕ್ಕೆ ಅನುಗುಣವಾಗಿಯೇ ಇದೆ.

ಕ್ಲಾಡ್ ಬರ್ನಾರನ ತಂದೆತಾಯಿಗಳ ವಿಲ್ಲಿಫ್ರಾಂಕಿಯ ಹತ್ತಿರ ಸೇಂಟ್ ಜ್ಯೂಲಿಯೆನ್ ಎಂಬ ಹಳ್ಳಿಯ ಸಾಧಾರಣ ಅಂತಸ್ತಿನ ದ್ರಾಕ್ಷಿತೋಟ ಕೆಲಸಗಾರರು. ಇವರ ಮೊದಲ ಮಗನೇ ಕ್ಲಾಡ್. ಇವನಿಗೆ ಸಹೋದರಿಯೊಬ್ಬಳು ಇದ್ದಳೆಂದು ತಿಳಿದಿದೆ. ಹುಡುಗನ ಯೋಗಕ್ಷೇಮ ಶಿಕ್ಷಣಗಳಲ್ಲಿ ತಂದೆ ಪೀರ್ರ್ ಫ್ರಾಂಕಾಯ್ಸ್ ಬರ್ನಾರ್ ಯಾವ ಪಾತ್ರವನ್ನೂ ವಹಿಸಲಿಲ್ಲ. ಕೈಗೊಂಡಿದ್ದ ದ್ರಾಕ್ಷಿ ತೋಟದ ಕೆಲಸದಲ್ಲಿ ಹಾಗೂ ಸಣ್ಣ ದರ್ಜೆಯ ಮದ್ಯವ್ಯಾಪಾರದಲ್ಲಿ ಸಾಕಷ್ಟು ಸಂಪಾದನೆ ಆಗದೆ ಇವನು ಅವನ್ನು ಬಿಟ್ಟು ಶಾಲಾಧ್ಯಾಪಕನಾದ. ಅಲ್ಲಿಯೂ ಸಂಪಾದನೆ ಸಾಲದೆ ಕಷ್ಟಜೀವನವನ್ನೇ ನಿರ್ವಹಿಸುತ್ತಿದ್ದು ವಯೋಮಿತಿಯಿಂದ ನಿವೃತ್ತನಾಗುವ ವೇಳೆಗೆ ಸಂಸಾರದ ಮೇಲೆ ಭಾರಿ ಸಾಲ ಹೊರಿಸಿದ್ಧ. ದೈವಭಕ್ತಿ ಹಾಗೂ ಸಾಧ್ವಿಯಾದ ತಾಯಿಯ ಜೀನಳ ಮೇಲ್ವಿಚಾರಣೆಯಲ್ಲಿ ಬೆಳದ ಕ್ಲಾಡಿಗೆ ಅಕೆಯ ಮೇಲೂ ತನ್ನ ಹುಟ್ಟುಸ್ಥಳ ಮನೆಗಳ ಮೇಲೂ ತುಂಬ ಮಮತೆ. ಮುಂದೆ ಅವನು ಮೇಲ್ಮಟ್ಟದ ಸಂಶೋಧಕನಾಗಿ ಮತ್ತು ಪ್ರಧ್ಯಾಪಕನಾಗಿ ಪ್ರಸಿದ್ಧಿ ಪಡೆದು ಹಣವಂತನಾದ ಮೇಲೆ ಆ ಮನೆಯನ್ನು ಕೊಂಡುಕೊಂಡದ್ದಲ್ಲದೆ (1860) ಪ್ರತಿ ಮಾಗಿ ಕಾಲದಲ್ಲೂ ಪ್ಯಾರಿಸ್ಸಿನಿಂದ ಸೇಂಟ್ ಜ್ಯೂಲಿಯನ್ನಿಗೆ ಹೋಗಿ ವಿಶ್ರಾಂತಿ ಪಡೆಯುತ್ತಿದ್ದ ಕೂಡ. ವಾಸ್ತವವಾಗಿ ಬರ್ನಾರ್ ಪ್ಯಾರಿಸ್ ಬಿಟ್ಟು ಬೇರೆ ಸ್ಥಳಕ್ಕೆ ಹೋಗುತ್ತಿದ್ದುದೆಂದರೆ ಅದು ಸೇಂಟ್ ಜ್ಯೂಲಿಯೆನ್ನಿಗೆ ಮಾತ್ರ.
ವಿಲ್ಲಿಫ್ರಾಂಕಿ ಮತ್ತು ಥಾಯ್ಸಿಗಳಲ್ಲಿ ಕ್ಲಾಡ್‍ಬರ್ನಾರನ ಮಾಧ್ಯಮಿಕ ವಿದ್ಯಾಭ್ಯಾಸ ಮುಗಿದ ಕೂಡಲೆ ಅವನು ಲಿಯಾನ್ಸಿನ ಮಿಲ್ಲೆಟ್ ಎಂಬ ವೈದ್ಯನ ಶಿಷ್ಯನಾಗಿ ಸೇರಿದ (1832). ಅದರೆ ವೈದ್ಯವೃತ್ತಿ ಕಲಿಯುವುದಕ್ಕಿಂತ ಹೆಚ್ಚಾಗಿ ನಾಟಕ ಬರೆಯುವ ಗೀಳು ಇವನಿಗೆ. ಇವನು ಬರೆದ ಒಂದು ಪ್ರಹಸನ (ಅದು ಇಂದು ಅಲಭ್ಯ) ಸ್ಥಳೀಯವಾಗಿ ಪ್ರದರ್ಶಿತವಾಗಿ ಮೆಚ್ಚಲ್ಪಟ್ಟಿತಲ್ಲದೆ ಅದಕ್ಕೆ ನೂರು ಫ್ರಾಂಕುಗಳ ಮೌಲ್ಯವೂ ದೊರೆಯಿತು. ಇದರಿಂದ ಉತ್ತೇಜಿತವಾಗಿ ಬರ್ನಾರ್ ಅರ್ಥರ್ ಡಿ ಬ್ರಿಟಾಗ್ನಿ ಎಂಬ ವೀರೋಚಿತ ನಾಟಕ ರಚಿಸಿದ. ಇವನು ಈ ಗೀಳು ಮಿಲ್ಲೆಟನಿಗೆ ಸರಿಬೀಳದೆ ಇವನನ್ನು ಶಿಷ್ಯವೃತ್ತಿಯಿಂದ ವಜಾಮಾಡಿದ. ಬರ್ನಾರನಿಗಾದರೂ ಇದು ಹಿತವಾದುವೇ ಆಗಿತ್ತು. ಏಕೆಂದರೆ ಆಗಿನ ವೈದ್ಯರ ಬೂಟಾಟಿಕ, ಮರೆ, ಮೋಸ, ಕೊಂಕುಗಳು ಇವನಿಗೆ ಸುತರಾಂ ಹಿಡಿಸುತ್ತಿರಲಿಲ್ಲ. ನಾಟಕವನ್ನು ಪ್ಯಾರಿಸ್ಸಿನಲ್ಲಿ ಪ್ರಕಟಿಸಿ ಒಳ್ಳೆಯ ನಾಟಕಕರ್ತ ಎಂಬ ಹೆಸರು ಪಡೆದು ಜೀವಿಸಬೇಕೆಂದು ನಿರ್ಧರಿಸಿ 1834ರಲ್ಲಿ ಅಲ್ಲಿಗೆ ತೆರಳಿದ, ಅಲ್ಲಿಯ ಪ್ರಖ್ಯಾತ ವಿಮರ್ಶಕ ಗಿರಾರ್ಡಿನ್ ಈ ನಾಟಕವನ್ನು ಪರಿಶೀಲಿಸಿ ಬರ್ನಾರ್ ನಾಟಕ ರಚನೆಯ ಹುಚ್ಚನ್ನು ಬಿಟ್ಟು ಜೀವನೋಪಾಯಕ್ಕಾಗಿ ವೈದ್ಯಕೀಯದಂಥ ಯಾವುದಾದರೂ ವೃತ್ತಿಗೆ ತರಬೇತಿ ಪಡೆಯುವುದು ಒಳ್ಳೆಯೆದೆಂದು ಸೂಚಿಸಿದ. ಇದರಿಂದ ಈತನ ಉತ್ಸಾಹಭಂಗವಾದರೂ ಆ ಸೂಚನೆಯಂತೆಯೇ ನಡೆದುಕೊಂಡು ವೈದ್ಯ ವ್ಯಾಸಂಗಕ್ಕೆ ಸೇರಿ ವೈದ್ಯಪೂರ್ವ ಪದವಿ ಪಡೆದ.

1839ರಲ್ಲಿ ಬರ್ನಾರನಿಗೆ ಪ್ಯಾರಿಸ್ಸಿನ ಮುನಿಸಿಪಲ್ ಆಸ್ಪತ್ರೆಯಲ್ಲಿ ಇಂಟರ್ನಿ ಆಗಿ ಕೆಲಸ ದೊರೆಯಿತು. ಜೊತೆಗೆ ಸುಪ್ರಸಿದ್ಧನಾದ ಫ್ರಾಂಕಾಯ್ಸ್ ಮೆಜಿಂಡಿ ಎಂಬ ವೈದ್ಯವಿಜ್ಞಾನಿಯ ಸಹಾಯಕನಾಗಿಯೂ ಸೇರಿಕೊಂಡ, ಪ್ರಯೋಗಗಳಿಗಾಗಿ ಶಸ್ತ್ರಕ್ರಿಯ ಹಾಗೂ ಅಂಗಛ್ಛೇದನ ಮಾಡುವಲ್ಲಿ ಬರ್ನಾರನ ಕೈಚಳಕವನ್ನು ಮೆಜೆಂಡಿ ಮೆಚ್ಚಿಕೊಳ್ಳುತ್ತಿದ್ದರೂ ಅನ್ಯಕಾಲದಲ್ಲಿ ಇವನನ್ನು ತುಚ್ಛವಾಗಿ ಕಾಣುತ್ತಿದ್ದುದು ಇವನಿಗೆ ಬೇಸರ ಉಂಟುಮಾಡಿ ಈ ಕೆಲಸವನ್ನು ಬಿಟ್ಟು ವಿಲ್ಲಿಫ್ರಾಂಕಿಗೆ ವಾಪಸಾಗಿ ಗ್ರಾಮಾಂತರ ವೈದ್ಯವೃತ್ತಿಯಲ್ಲಿ ನಿರತವಾಗುವುದು ಒಳ್ಳೆಯದು ಎಂದು ಯೋಚಿಸಿದ. ಅದರೆ ಪೀರ್ರ್ ರೇಯಾನ್ ಎಂಬ ಇನ್ನೊಬ್ಬ ಘನವೈದ್ಯನ ಮಧ್ಯಸ್ಥಿಕೆಯಿಂದ ಮಜೆಂಡಿಯ ಕೈಕೆಳಗೆ ಮುಂದುವರಿದ್ದಾಯಿತು. ಕಾರ್ಡಟೆಂಪನಿ ಎಂಬ ನಗರದ ವಿಷಯವಾಗಿ ಮಾಡಿದ ಪ್ರಯೋಗ ಫಲಿತಾಂಶಗಳನ್ನು ಒಳಗೊಂಡ ಪ್ರಬಂಧ ಇವನ ಮೊತ್ತಮೊದಲ ವೈದ್ಯಕೀಯ ಪ್ರಬಂಧ. ಇದು 1843ರಲ್ಲಿ ಪ್ರಕಟವಾಯಿತು. ಅಲ್ಲದೆ ಜಠರದಲ್ಲಿ ಜೀರ್ಣಕ್ರಿಯೆಯ ವಿಷಯವಾಗಿ ತಾನು ಮಾಡಿದ ಪ್ರಯೋಗಗಳ ಫಲಿತಾಂಶವನ್ನು ಅದೇ ವರ್ಷ ಒಂದು ಪ್ರಬಂಧವಾಗಿ ಬರೆದು ಒಪ್ಪಿಸಿ ಪರೀಕ್ಷೆ ತೆಗೆದುಕೊಂಡು ಸಾರ್ಬನ್ನಿನ (ಪ್ಯಾರಿಸ್) ಎಂ.ಡಿ. ಪದವಿ ಪಡದ. ಸೂಜಿಮದ್ದಿನ ರೀತಿಯಲ್ಲಿ ಕಬ್ಬಿನ ಸಕ್ಕೆರೆಯ ದ್ರಾವಣವನ್ನು ನೇರವಾಗಿ ರಕ್ತಕ್ಕೆ ಸೇರಿಸಿದರೆ ಅದು ರಾಸಾಯನಿಕವಾಗಿ ಏನೂ ವ್ಯತ್ಯಾಸಗೊಳ್ಳದೆ ಮೂತ್ರದಲ್ಲಿ ಪೂರ್ಣವಾಗಿ ವಿಸರ್ಜಿತವಾಗುತ್ತದೆ: ಅದರೆ ಅದೇ ಸಕ್ಕರೆ ದ್ರಾವಣವನ್ನು ಮುಂಚೆಯೇ ಹೊಚ್ಚ ಹೊಸ ಜಠರ ರಸದ ಪ್ರಕ್ರಿಯೆಗೆ ಒಳಪಡಿಸಿ ಅನಂತರ ಚುಚ್ಚುಮದ್ದಾಗಿ ರಕ್ತಕ್ಕೆ ಸೇರಿಸಿದರೆ ಮೂತ್ರದಲ್ಲಿ ಸಕ್ಕರೆ ಕಂಡುಬರುವುದಿಲ್ಲ. ಹಾಗೆ ಅಕಸ್ಮಾತ್ ಕಂಡು ಬಂದರೂ ಅದು ಕಬ್ಬಿನ ಸಕ್ಕರೆ ಆಗಿರುವುದಿಲ್ಲ. ಆದ್ದರಿಂದ ಜಠರರಸ ಕಬ್ಬಿನ ಸಕ್ಕರೆಯನ್ನು ದೇಹಸಕ್ಕರೆಯಾಗಿ ಮಾರ್ಪಡಿಸುತ್ತದೆ ಎಂಬುದು ಈ ಪ್ರಬಂಧದ ಸಾರಾಂಶ. ಕ್ರಮೇಣ ಮೆಜೆಂಡಿಯ ವ್ಯಾಸಂಗ ವಿಷಯಗಳು ಹಾಗೂ ಕ್ರಮಗಳಲ್ಲಿ ಬರ್ನಾರನಿಗೆ ವಿಶೇಷ ಅಭಿರುಚಿ ಹುಟ್ಟಿ ತಾನೂ ಸ್ವತಂತ್ರವಾಗಿ ಶರೀರಕ್ರಿಯಾ ವಿಜ್ಞಾನ ಸಂಶೋಧಕನಾಗಬೇಕೆಂದೂ ಈ ಬಗ್ಗೆ ಅಧ್ಯಾಪಕರಿಗೆ ಹೆಚ್ಚು ಸೌಲಭ್ಯಗಳು ಒದಗುತ್ತಿದ್ದುದರಿಂದ ಅಧ್ಯಾಪಕವೃತ್ತಿಗಾಗಿ ತರಬೇತಿ ಪಡೆಯಬೇಕೆಂದೂ ನಿರ್ಧರಿಸಿದ. ಆದರೆ ತರಬೇತಿಪೂರ್ವಪರೀಕ್ಷೆಯಲ್ಲಿ ಅನುತ್ತೀರ್ಣನಾದುದರಿಂದ ಅಧ್ಯಾಪಕನಾಗಲು ಅವಕಾಶವಾಗಲಿಲ್ಲ. ತನಗೆ ಆಗಲೇ 31 ವರ್ಷ ವಯಸ್ಸಾಗಿದ್ದರೂ ಸಹಾಯಕ ಸಂಶೋಧಕನಾಗಿಯೇ ಇರಬೇಕಾಗಿ ಬಂದ ಪರಿಸ್ಥಿತಿಯಿಂದ ಮತ್ತು ತಂದೆ ಹೊರಸಿದ್ದ ಸಾಲದ ಭಾರ ಇನ್ನೂ ಹಾಗೆಯೇ ಇದ್ದುದರಿಂದ ಬೇಸರಪಟ್ಟು ಗ್ರಾಮಾಂತರ ವೈದ್ಯವೃತ್ತಿಯೇ ತನಗೆ ಕಟ್ಟಿಟ್ಟದ್ದು ಎಂದುಕೊಂಡು 1844ರಲ್ಲಿ ಮೆಜೆಂಡಿಯ ಕೈಕೆಳಗಿನ ಸಹಾಯಕ ಕೆಲಸಕ್ಕೆ ರಾಜಿನಾಮೆ ಕೊಟ್ಟ. ಆದರೆ 1845ರ ಪ್ರಾರಂಭದಲ್ಲಿ ಅದೃಷ್ಟವಶಾತ್ ಒಬ್ಬ ಸ್ನೇಹಿತನ ನೆರವಿನಿಂದ ಪ್ಯಾರಿಸ್ಸಿನ ಧನಿಕ ವೈದ್ಯನೊಬ್ಬನ ಮಗಳು ಮೇರಿ ಫ್ರಾಂಕಾಯ್ಸ್ ಮಾರ್ಟಿನ್ ಎಂಬಾಕೆಯೊಡನೆ ವಿವಾಹವಾಗುವಂತಾಗಿ ಆಕೆ ಬರ್ನಾರನಿಗೆ ವಿವಾಹ ಬಳುವಳಿಯಾಗಿ 60,000 ಫ್ರಾಂಕುಗಳನ್ನು ತಂದದ್ದರಿಂದ ಅವನು ವಿಜ್ಞಾನಸಂಶೋಧನೆಗಳನ್ನು ಮುಂದುವರಿಸಲು ಅನುಕೂಲವಾಯಿತು.

ಆದರೆ ಈ ಮದುವೆಯಿಂದ ಬರ್ನಾರನಿಗೆ ಸುಖ ದೊರೆಯಲಿಲ್ಲಿ. ತಾನು ತಂದ ಹೇರಳ ಬಳುವಳಿ ಗಂಡನ ತಂದೆ ಹೊರಸಿದ್ದ ಋಣವನ್ನು ತೀರಿಸುವುದಕ್ಕೆ ವಿಶೇಷವಾಗಿ ವಿನಿಯೋಗವಾದದ್ದು ಶ್ರೀಮತಿ ಬರ್ನಾರಳಿಗೆ ಅತ್ಯಂತ ಅಸಮಾಧಾನ ಹಾಗೂ ಕ್ರೋಧಕ್ಕೆ ಕಾರಣವಾದವು. ಜೊತೆಗೆ ಅತ್ತೆಯೊಡನೆ ಆಕೆಗೆ ಹೊಂದಾಣಿಕೆ ಬರಲಿಲ್ಲ. ತಾಯಿಯನ್ನು ಬಹುವಾಗಿ ಪ್ರೀತಿಸುತ್ತಿದ್ದ ಬರ್ನಾರ್ ವಿಶ್ರಾಂತಿಗೆಂದು ಪ್ರತಿವರ್ಷವೂ ಸೆಂಟ್ ಜ್ಯಾಲಿಯೆನ್ನಿಗೇ ತೆರಳುತ್ತಿದ್ದದೂ ಶ್ರೀಮತಿ ಬರ್ನಾರಳಿಗೆ ಅಸಮಾಧಾನ. ಹೀಗೆ ಮನಃಕಷಾಯದಿಂದ ಸಂಸಾರ ನಡೆಸುತ್ತಿದ್ದ ಬರ್ನಾರ್ ದಂಪತಿಗಳಿಗೆ 1846ರಲ್ಲಿ ಒಂದು ಗಂಡುಮಗು ಜನಿಸಿತು. ಆದರೆ ಅದು ಶೈಶವದಲ್ಲಿ ಮೃತವಾಯಿತು. ಮುಂದೆ ಎರಡು ಹೆಣ್ಣುಮಕ್ಕಳಾದುವು. ಆದರೆ ಹುಡಗಿಯರಿಗೆ ತಂದೆಯ ಮೇಲೆ ಪ್ರೇಮದ ಬದಲು ದ್ವೇಷ ಮೂಡುವಂತೆ ಶ್ರೀಮತಿ ಬರ್ನಾರ್ ಅವರನ್ನು ಬೆಳೆಸಿದಳು. ಬರ್ನಾರ್ ತನ್ನ ವ್ಯಾಸಂಗಕ್ಕಾಗಿ ಜೀವಂತ ಪ್ರಾಣಿಗಳ ಮೇಲೆ ಪ್ರಯೋಗ ಮಾಡುತ್ತ ಅವನ್ನು ಹಿಂಸಿಸುತ್ತಿದ್ದುದು ಇವರ ಅಸಮಾಧಾನಕ್ಕೆ ಇನ್ನೊಂದು ಕಾರಣ. ತನ್ನ ಮದುವೆಯ ಬಳುವಳಿಯ ನೆರವಿನಿಂದ ಬರ್ನಾರ್ ವೃತ್ತಿವೈದ್ಯನಾಗಿ ಖ್ಯಾತಿಗಳಿಸಿ ಸಮಾಜದಲ್ಲಿ ಪ್ರತಿಷ್ಠಿತವ್ಯಕ್ತಿ ಆಗಬೇಕಾಗಿತ್ತೆಂಬ ಆಕೆಯ ಉತ್ಕಟೇಚ್ಛೆಯ ಬದಲಾಗಿ ಈತ ಕೈಗೊಂಡಿದ್ದ ಈ ಹಿಂಸಾತ್ಮಕ ಸಂಶೋಧನ ಮಾರ್ಗ ಶ್ರೀಮತಿ ಬರ್ನಾರಳಿಗೆ ಏನೂ ಹಿಡಿಸಲಿಲ್ಲ. ಹೀಗಾಗಿ ಸಂಸಾರದಲ್ಲಿ ವಿಮುಖ ತೀವ್ರವಾಗುತ್ತ ಕೊನೆಗೆ ಶ್ರೀಮತಿ ಬರ್ನಾರ್ ವಿವಾಹವಿಚ್ಛೇದನ ಪಡೆದು ಇಬ್ಬರು ಹೆಣ್ಣುಮಕ್ಕಳೊಡನೆ 1868ರಲ್ಲಿ ಬೇರೆ ಹೊರಟುಹೋದಳು. ಇಷ್ಟೇ ಅಲ್ಲ, ಅವಳ ಮನಸ್ತಾಪ ಇನ್ನೂ ಮುಂದುವರಿಯಿತು. ಬರ್ನಾರ್ ನಿಧನವಾದ ಒಂಬತ್ತು ವರ್ಷಗಳ ತರುವಾಯ ಅಂದರೆ (1887ರಲ್ಲಿ) ಅವನು ತಾರಣ್ಯದಲ್ಲಿ ರಚಿಸಿದ್ದ ಅರ್ಥರ್ ಡಿಬಿಟಾಗ್ನಿ ನಾಟಕವನ್ನು ಪ್ರಕಟಿಸಬೇಕೆಂದು ಅವನ ಹಿತೈಷಿಗಳು ನಿರ್ಧರಿಸಿದಾಗ ನ್ಯಾಯಾಲಯದ ಮೂಲಕ ವ್ಯವಹರಿಸಿ ಈಕೆ ಅದನ್ನು ತಡೆದುಬಿಟ್ಟಳು. ಎಷ್ಟೂ ಕಾಲವಾದ ಅದು ಈಚೆಗೆ (1946) ಪ್ರಕಟಗೊಂಡಿತು.

1845ರಲ್ಲಿ ವಿವಾಹದ ಬಳುವಳಿ ದೊರೆತು ವೈಜ್ಞಾನಿಕ ಸಂಶೋಧನೆಗಳಲ್ಲಿ ಬರ್ನಾರ್ ಮುಂದುವರಿಯಬಲ್ಲನೆಂದಾದಬಳಿಕ ವೈಜ್ಞಾನಿಕವಲಯದಲ್ಲಿ ಇವನ ಪರ್ವಕಾಲ ಪ್ರಾರಂಭವಾಯಿತು ಎನ್ನಬಹುದು. 1847 ಡಿಸೆಂಬರಿನಲ್ಲಿ ಇವನು ಕಾಲೇಜ್ ಡಿ ಫ್ರಾನ್ಸಿನಲ್ಲಿ ಪುನಃ ಮೆಜೆಂಡಿಯ ಸಹಾಯಕನಾಗಿ ಸೇರಿದ. ಅಲ್ಲದೆ ಮೆಜೆಂಡಿ ಬೋಧಿಸುತ್ತಿದ್ದ ತರಗತಿಗೆ ಚಳಿಗಾಲದಲ್ಲಿ ಇವನೇ ಪಾಠ ಹೇಳುತ್ತಿದ್ದ. ಮುಂದೆ 1852ರಲ್ಲಿ ಮೆಜೆಂಡಿ ಪ್ರಾಧ್ಯಾಪಕತ್ವದಿಂದ ನಿವೃತ್ತಿ ಹೊಂದಿದ ಬಳಿಕ ಬಾರ್ನರ್ ಅದೇ ಕಾಲೇಜಿನಲ್ಲಿ ಶಿಕ್ಷಣ ಕರ್ತವ್ಯವನ್ನು ಪೂರ್ಣವಾಗಿ ಹೊತ್ತ. ಜೊತೆಗೆ ಮೆಜೆಂಡಿಯ ಪ್ರಯೋಗಾಲಯದ ನೇತೃತ್ವವನ್ನೂ ವಹಿಸಿಕೊಂಡ. 1848ರಲ್ಲಿ ಸೊಸೈಟಿ ಡಿ ಬಯಾಲಜಿ ಎಂಬ ಸಂಸ್ಥೆ ಪ್ರಾರಂಭವಾಗಿ ಬರ್ನಾರ್ ಅದರ ಉಪಾಧ್ಯಕ್ಷನಾದ. ತನ್ನ ಪ್ರಯೋಗ ಫಲಿತಾಂಶಗಳನೇಕವನ್ನು ಬರ್ನಾರ್ ಈ ಸಂಸ್ಥೆಯಲ್ಲೇ ಮೊದಲಾಗಿ ಪ್ರಕಟಿಸಿದ್ದು ಉಂಟು. 1849ರಲ್ಲಿ ಇವನು ಲೀಜಿಯನ್ ಆಫ್ ಆನರ್ ಸದಸ್ಯನಾಗಿ ಗೌರವಿಸಲ್ಪಟ್ಟ. 1850ರಲ್ಲಿ ಪ್ರಾಧ್ಯಾಪಕನಾಗಲು ಅರ್ಹತೆ ಪಡಯುವುದಕ್ಕಾಗಿ ಪ್ರಾಣಿವಿಜ್ಞಾನಿ ವಿಭಾಗದಲ್ಲಿ ನಿರ್ದಿಷ್ಟ ವ್ಯಾಸಂಗ ಪ್ರಾರಂಭಿಸಿ 1853 ಮಾರ್ಚಿಯಲ್ಲಿ ಸಾರ್ಬನ್ನಿನಲ್ಲಿ ಡಾಕ್ಟೊರೇಟ್ ಪಡೆದ. ಇದಕ್ಕಾಗಿ ಇವನು ಸಿದ್ಧಗೊಳಿಸಿದ ಪ್ರಬಂಧಕ್ಕೂ ಕಾರ್ಡ ಟಿಂಪನಿ ನರದ ವಿಷಯವಾಗಿ ಇವನು ತಯಾರಿಸಿದ ಮೊದಲ ಪ್ರಬಂಧಕ್ಕೂ ಕೇವಲ ಹತ್ತು ವರ್ಷಗಳ ಅಂತರ. ಆದರೆ ಇಷ್ಟರಲ್ಲಿ ಇವನು ಅನೇಕ ಸಂಶೋಧನೆಗಳನ್ನು ಕೈಗೊಂಡು ಅವುಗಳ ವಿಚಾರದಲ್ಲಿಯ ಸಿಕ್ಕುಗಳನ್ನು ಬಿಡಿಸಿ ಇಡೀ ಯೂರೊಪಿನಲ್ಲಿ ಸಹ ವಿಜ್ಞಾನಿಗಳ ಮೆಚ್ಚುಗೆ ಮರ್ಯಾದೆಗಳಿಸಿದ. ಜಠರದಲ್ಲಿ ರಾಸಾಯನಿಕ ಜೀರ್ಣಕ್ರಿಯೆಯ ವಿಚಾರ ಮುಂದುವರಿಸಿದ್ದು (1843-45) ಜೀರ್ಣಕ್ರಿಯೆಯಲ್ಲಿ ಪಿತ್ತರಸದ ಪಾತ್ರ, ಕ್ಯುರಾರಿ ಚುಚ್ಚುಮದ್ದಿನಂತೆ ಪ್ರಯೋಗಿಸಲ್ಪಟ್ಟಾಗ ದೇಹದಲ್ಲಿ ಕಂಡು ಬರುವ ವಿಷಪರಿಣಾಮಗಳು ಶಿರ ಹಾಗೂ ಗಂಟಲಿನ ನರಪೂರೈಕೆಯ ವಿಚಾರ (ಎಲ್ಲವೂ 1844-45), ಇಂಗಾಲ ಮಾನಾಕ್ಸೈಡಿನ ವಿಷಪರಿಣಾಮದ ಕಾರಣ, ಸಸ್ಯಾಹಾರಿ ಮತ್ತು ಮಾಂಸಾಹಾರಿ ಪ್ರಾಣಿಗಳಲ್ಲಿ ವಿಸರ್ಜಿತವಾಗುವ ಮೂತ್ರದಲ್ಲಿಯ ವ್ಯತ್ಯಾಸ, ಮೇದೋಜೀರಕಾಂಗದ ಕ್ರಿಯೆ ಮತ್ತು ಮೇದಸ್ಸಿನ ಪಚನ ಹಾಗೂ ರಕ್ತ ಗತವಾಗುವಿಕೆ, ಹೃದಯದ ಮೇಲೆ ವೇಗಸ್‍ನರದ ಪ್ರಭಾವ (1846), ವ್ಯಕ್ತಿ ನಿರಶನದಲ್ಲಿರುವಾಗ ರಕ್ತದಲ್ಲಿ ಸಕ್ಕರೆಯ ಅಸ್ತಿತ್ವ, ದೇಹದಲ್ಲಿ ಸಕ್ಕರೆಯ ಸಂಶ್ಲೇಷಣೆ ಪೂರೈಕೆಗಳಲ್ಲಿ ಯಕೃತ್ತಿನ ಪಾತ್ರ (1843), ಜೀರ್ಣ ಕ್ರಿಯೆಯಲ್ಲಿ ಮೇದೋಜೀರಕಾಂಗದ ಪಾತ್ರದ ವಿಷಯವಾಗಿ ಗ್ರಂಥರಚನೆ ಮತ್ತು ಮಿದುಳಿನ ವಿಶಿಷ್ಟ ಸ್ಥಳದ ಆಘಾತದಿಂದ ಕಂಡುಬರುವ ಸಿಹಿಮೂತ್ರ ಸ್ಥಿತಿ (1849), ಷಿಷ್ಟಪದಾರ್ಥಗಳ ಪಚನ ಹಾಗೂ ಕ್ಯುರಾರಿಯ ವಿಷಯವಾಗಿ ಹೆಚ್ಚು ವಿವರಗಳು (1850) ರಕ್ತನಾಳಗಳನ್ನು ಸಂಕೋಚಿಸುವ ನರಗಳು (1852) ಇತ್ಯಾದಿ ಇವನು ಈ ಕಾಲದಲ್ಲಿ ಕೈಗೊಂಡ ಸಂಶೋಧನೆಗಳು. ಸಕ್ಕರೆಯ ಸಂಶ್ಲೇಷಣೆ ವಿಶ್ಲೇಷಣೆಗಳಲ್ಲಿ ಯಕೃತ್ತಿನ ಪಾತ್ರವನ್ನು ಅವಿಷ್ಕರಿಸಿ ಪ್ರಯೋಗ ಫಲಿತಾಂಶಗಳನ್ನು ಒಳಗೊಂಡ ಪ್ರೌಢ ಲೇಖನವನ್ನು ರಚಿಸಿದ್ದಕ್ಕಾಗಿ ಇವನಿಗೆ 1853ರಲ್ಲಿ ವೈದ್ಯಕೀಯರ ಡಾಕ್ಟರ್ ಆಫ್ ಸೈನ್ಸ್ ಪದವಿ ದೊರೆಯಿತು. ಹೀಗಾಗಿ ವೈದ್ಯ ವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಲು ಇದ್ದ ಅಡಚಣೆ ನೀಗಿತು. ಸಾರ್ಬನ್ನಿನಲ್ಲಿ ಇವನಿಗಾಗಿಯೇ ಸಾರ್ವತ್ರಿಕ ಶರೀರಕ್ರಿಯಾವಿಜ್ಞಾನದ (ಜನರಲ್ ಫಿಸಿಯಾಲಜಿ-ಶರೀರ ಕ್ರಿಯಾವಿಜ್ಞಾನದಲ್ಲಿ ಪ್ರತ್ಯೇಕ ಭಾಗವೆಂದೇ ಗಣಿಸಬೇಕೆಂದು ಬರ್ನಾರನೇ ವಿಶಿಷ್ಟಗೊಳಿಸಿದ ಶರೀರಕ್ರಿಯಾವಿಜ್ಞಾನದ ಭಾಗ) ಪ್ರಾಧ್ಯಾಪಕಹುದ್ದೆ ನಿರ್ಮಾಣವಾಯಿತು (ಮೇ 1854). ಅದೇ ವರ್ಷ ಅಕ್ಯಾಡೆಮಿ ಆಫ್ ಸೈನ್ಸಿನ ಸದಸ್ಯನಾಗಿಯೂ ಈತ ಚುನಾಯಿತನಾದ. ಮೆಜೆಂಡಿಯ ನಿಧನದ (1855) ತರುವಾಯ ಇವನು ಕಾಲೇಜ್ ಡಿಫ್ರಾನ್ಸಿನಲ್ಲಿ ಶರೀರಕ್ರಿಯಾವಿಜ್ಞಾನದ ಪ್ರಾಧ್ಯಾಪಕನಾಗಿ ನೇಮಕಗೊಂಡ. 1861ರಲ್ಲಿ ಅಕಾಡೆಮಿ ಆಫ್ ಮೆಡಿಸಿನ್ನಿನ ಸದಸ್ಯನಾಗಿ ಚುನಾಯಿತನಾದ. 1854ರಿಂದ 1860ರ ನಡುವೆ ತಾನು ಮುಂಚೆ ಕೈಗೊಂಡಿದ್ದ ಸಂಶೋಧನೆಗಳನ್ನು ಸ್ಥಿರೀಕರಿಸಿದ. ಯಕೃತ್ತು ಸಕ್ಕರೆಯನ್ನು ಸಂಶ್ಲೇಷಿಸಿ ಸಂಗ್ರಹಿಸುವುದೆಂದು ತೋರಿಸಿ ಸಂಗ್ರಹರೂಪಕ್ಕೆ ಗ್ಲೈಕೊಜಿನ್ ಎಂದೂ ಹೆಸರಿಟ್ಟದಲ್ಲದೆ ಅದನ್ನು ಪ್ರತ್ಯೇಕಿಸಿ ಅದರ ರಾಸಾಯನಿಕ ಗುಣಗಳನ್ನು ವಿವರಿಸಿದ (1855-57). ರಕ್ತನಾಳಗಳ ನಿಯಂತ್ರಣದಲ್ಲಿ ಅವನು ಸಂಕೋಚಿಸುವ ನರಗಳ ಜೊತೆಗೆ ಹಿಗ್ಗಿಸುವ ನರಗಳೂ ಇರುತ್ತವೆಂದು ತೋರಿಸಿದ (1858). ಶರೀರ ಕ್ರಿಯೆಯಲ್ಲಿ ಅಂತಃಸ್ರಾವ ಕೋಶಾವರಣದ್ರವ, ಸ್ಥಳೀಯ ರಕ್ತಪೂರೈಕೆಯ ನಿಯಂತ್ರಣ, ಒಂದೇ ಅಂಗಕ್ಕೆ ಪರಸ್ಪರ ವಿರುದ್ಧ ಕ್ರಿಯೆಯಳ್ಳ ಎರಡೂ ರೀತಿಯ ನರಗಳ ಪೂರೈಕೆ ಇತ್ಯಾದಿಗಳ ಸಾರ್ವತ್ರಿಕ ಪಾತ್ರವನ್ನು ಸೂಚಿಸುವ ಅನೇಕ ಮೂಲಭೂತ ಸೂತ್ರಗಳನ್ನು ಮಂಡಿಸಿದ್ದೂ ಈ ಕಾಲದಲ್ಲೆ. ಜೀವಿಗಳೆಲ್ಲವಲ್ಲೂ-ಅವು ಸಸ್ಯಗಳಾಗಲಿ, ಪಕ್ಷಿಗಳಾಗಲಿ, ಮೇಲ್ದರ್ಜೆ ಪ್ರಾಣಿಗಳಾಗಲಿ ಕೆಳದರ್ಜೆ ಪ್ರಾಣಿಗಳಾಗಲಿ-ಸಾರ್ವತ್ರಿಕವಾಗಿ ಕಂಡುಬರುವ ಕ್ರಿಯೆಗಳೆಲ್ಲವೂ ಇಂಥ ಮೂಲಭೂತ ಸೂತ್ರಗಳಂತೆಯೇ ಜರಗುತ್ತವೆ. ಇಂಥ ಸೂತ್ರಗಳ ವ್ಯಾಸಂಗವೇ ಸಾರ್ವತ್ರಿಕ ಶರೀರ ಕ್ರಿಯಾವಿಜ್ಞಾನ (ಜನರಲ್ ಫಿಸಿಯಾಲಜಿ) ಎಂದು ಇವನು ಖಚಿತವಾಗಿ ಪ್ರತಿಪಾದಿಸಲು ಪ್ರಾರಂಭಿಸಿದ್ದೂ ಆಗಲೆ. ಗೊತ್ತುಗುರಿ ಇಲ್ಲದೆ ಪ್ರಯೋಗಗಳನ್ನು ಮಾಡುವುದು ಸಾಮಾನ್ಯವಾಗಿ ನಿಷ್ಪ್ರಯೋಜಕವೆಂದು ಒತ್ತಿಹೇಳಿ ಪ್ರಯೋಗಗಳಿಗೆ ಮುನ್ನಪೂರ್ವೋಕ್ತ ವಿಚಾರಗಳ ಆಧಾರದಿಂದ ಕಲ್ಪಿಸಿಕೊಂಡ ಸಂಶೋಧನಯೋಗ್ಯ ವಿಷಯ ಇದ್ದೇ ಇರಬೇಕೆಂದೂ ಕಲ್ಪನೆಯ ಸ್ಥಿರೀಕರಣಕ್ಕಾಗಿ ಇಲ್ಲವೆ ಖಂಡನೆಗಾಗಿ ದೀರ್ಘಾಲೋಚನೆಯಿಂದ ಯುಕ್ತ ಪ್ರಯೋಗಗಳನ್ನು ನಿರ್ಧರಿಸಿ ಅನಂತರ ಅವನ್ನು ಕೈಗೊಳ್ಳಬೇಕೆಂದೂ ಹೇಳುತ್ತಿದ್ದುದಲ್ಲದೆ ತಾನೂ ಹಾಗೆಯೇ ಮಾಡುತ್ತಿದ್ದ.

1854ರಲ್ಲಿ ಪ್ರಾಧ್ಯಾಪಕನಾಗುವ ತನಕ ಬರ್ನಾರನಿಗೆ ಸರಿಯಾದ ಪ್ರಯೋಗಾಲಯವೇ ಇರಲಿಲ್ಲ. ವಾಯುಬೆಳಕು ಸಾಲದ ಯಾವುದೋ ಕಿಷ್ಕಿಂಧ ಸ್ಥಳದಲ್ಲಿ ಸಲಕರಣೆಗಳನ್ನು ಹೇಗೋ ಜೋಡಿಸಿಕೊಂಡು ದಿನದ ದೀರ್ಘವೇಳೆ ಪ್ರಯೋಗಗಳಲ್ಲೇ ನಿರತನಾಗಿರುತ್ತಿದ್ದ ಬರ್ನಾರ್ ಆರೋಗ್ಯ ಕಳೆದುಕೊಂಡರು ಆಶ್ಚರ್ಯವಲ್ಲ. 1860ರಲ್ಲಿ ಜೀರ್ಣಾಂಗಗಳ ರೋಗ ತೀವ್ರವಾಗಿ ತಲೆದೋರಿತು. ರೋಗದಿಂದ ಚೇತರಸಿಕೊಳ್ಳಲು ಇವನು ಸೇಂಟ್ ಜ್ಯೂಲಿಯೆನ್ನಿಗೆ ತೆರಳಿದ. ಪುನಃ ಶೀಘ್ರದಲ್ಲಿಯೇ ಇನ್ನೊಮ್ಮೆ ತೀವ್ರರೋಗಗ್ರಸ್ತನಾದ್ದರಿಂದ ತಕ್ಕಷ್ಟು ದೀರ್ಘಕಾಲಿಕವಾಗಿಯೇ ವಿಶ್ರಾಂತಿ ಅವಶ್ಯವಾಯಿತು (1862-63). ಈ ಬಲವಂತ ವಿಶ್ರಾಂತಿ ಕಾಲದಲ್ಲೆ ಅವನ ಮೇರುಕೃತಿಯ ಕರಡುರಚನೆ ಅಯಿತು. ಪ್ರಾಯೋಗಿಕ ವೈದ್ಯವಿಜ್ಞಾನ ಗ್ರಂಥ ಪ್ರವೇಶಿಕೆ (ಇಂಟ್ರಡಕ್ಷನ್ ಟು ಎಕ್ಸ್‍ಪರಿಮೆಂಟಲ್ ಮೆಡಿಸಿನ್) ಎಂದು ಇದರ ಹೆಸರಿದ್ದರೂ ಇದೇ ಒಂದು ದೀರ್ಘ ಗ್ರಂಥದಂತಿತ್ತು. ವಾಸ್ತವವಾಗಿ ಪ್ರಾಯೋಗಿಕ ವೈದ್ಯವಿಜ್ಞಾನದ ತತ್ತ್ವಗಳು (ಪ್ರಿನ್ಸಿಪಲ್ಸ್ ಆಫ್ ಎಕ್ಸ್‍ಪರಿಮೆಂಟಲ್ ಮೆಡಿಸಿನ್) ಎಂಬ ಇನ್ನೂ ಸುದೀರ್ಘ ಹಾಗೂ ಪೂರ್ಣವಾದ ಗ್ರಂಥವನ್ನು ರಚಿಸಬೇಕೆಂದು ಹಿರಿ ಹುಮ್ಮಸ್ಸಿನಿಂದ ಈ ಮುನ್ನುಡಿಯನ್ನು ಬರ್ನಾರ್ ಲೇಖಿಸಿದ್ದ. ಈ ಲೇಖನವನ್ನು ತಿದ್ದಿ ಪ್ರಕಟಿಸಿದ್ದು ಇನ್ನೂ ಎರಡು ವರ್ಷಗಳ ಬಳಿಕ (1865). ಆದರೆ ಆ ಕೂಡಲೇ ಬರ್ನಾರ್ ಇನ್ನೊಮ್ಮೆ ತೀವ್ರವಾಗಿ ರೋಗಪೀಡಿತನಾದ. ಇದರಿಂದ ಚೇತರಿಸಿಕೊಳ್ಳಲು ಇವನಿಗೆ 18 ತಿಂಗಳುಗಳು ಅಗತ್ಯವಾದುವು. ತತ್ತ್ವಗಳ ರಚನೆ ಸಾಧ್ಯವಾಗದೆಂದು ಅದನ್ನು ಕೈಬಿಡಬೇಕಾಯಿತು. ಅದರೂ ಈ ಕಾಲದಲ್ಲಿ (1865-67) ಇವನು ವಿಶ್ರಾಂತನಾಗಿ ಸುಮ್ಮನೆ ಕೂರಲಿಲ್ಲ. ಫ್ರಾನ್ಸಿನಲ್ಲಿ ಸಾರ್ವತ್ರಿಕ ಶರೀರಕ್ರಿಯಾವಿಜ್ಞಾನದ ಹುಟ್ಟುಬೆಳವಣಿಗೆಗಳನ್ನು ವಿವರಿಸಿ ಒಂದು ವರದಿ ಕೊಡಬೇಕೆಂದು ಫ್ರಾನ್ಸಿನ ವಿದ್ಯಾಮಂತ್ರಿಯ ಕೋರಿಕೆ ಮೇರೆಗೆ ಅದನ್ನು 1866ರಲ್ಲಿ ತಯಾರಿಸಿದ. ಕೋಶಾವರಣ ದ್ರವ, ಅದರ ನಿರಂದೋಳನ ಸ್ಥಿತಿಯ (ಕಾನ್‍ಸ್ಟೆನ್ಸಿ) ಅಗತ್ಯ ಮುಂತಾದವುಗಳ ಪ್ರತಿಪಾದನೆಯನ್ನು ಅದರಲ್ಲಿ ಒತ್ತಿ ಹೇಳಲಾಗಿತ್ತು. 1868ರ ಡಿಸೆಂಬರಿನಲ್ಲಿ ಬರ್ನಾರನನ್ನು ಸಾರ್ಬನ್ನಿನಿಂದ ಮ್ಯೂಸಿಯಮ್ ಆಫ್ ನ್ಯಾಚುರಲ್ ಹಿಸ್ಟರಿಗೆ ವರ್ಗಾಯಿಸಲಾಯಿತು. ಅಲ್ಲಿ ಸಾರ್ವತ್ರೀಕರಣ ಕ್ರಿಯಾವಿಜ್ಞಾನದ ಪ್ರಾಧ್ಯಾಪಕಪೀಠ ಇರಲಿಲ್ಲ. ಇದ್ದುದು ತುಲನಾತ್ಮಕ ಶರೀರಕ್ರಿಯಾವಿಜ್ಞಾನದ (ಕಂಪ್ಯಾರೇಟಿವ್ ಫಿಸಿಯಾಲಜಿ) ಪೀಠ. ಆ ಪೀಠವನ್ನು ಅಲಂಕರಿಸಿದ್ಧ ಸುಪ್ರಸಿದ್ಧ ವಿಜ್ಞಾನಿ ಫ್ಲೂರೆನ್ಸ್ ಅದೇ ನಿವೃತ್ತನಾಗಿದ್ದ. ಆದ್ದರಿಂದ ಆ ಪೀಠವನ್ನು ಸಾರ್ಬನ್ನಿಗೆ ವರ್ಗಾಯಿಸಿ ಸಾರ್ಬನ್ನಿನ ಪೀಠವನ್ನೂ ಪೀಠಾಧಿಕಾರಿಯನ್ನೂ ಮ್ಯೂಸಿಯಮ್ಮಿಗೆ ವರ್ಗಮಾಡಲಾಯಿತು. ಇಲ್ಲಿಗೆ ಬಂದ ಮೇಲೆ ಬರ್ನಾರ್ ಕಾಲೇಜ್ ಡಿ ಫ್ರಾನ್ಸಿನಲ್ಲಿ ಶರೀರಕ್ರಿಯೆಯ ಬಗ್ಗೆ ಉಪನ್ಯಾಸಗಳನ್ನು ಪುನಃ ಪ್ರಾರಂಭಿಸಿದ. ಅನಾರೋಗ್ಯದ ದೆಸೆಯಿಂದ ಮೂರು ವರ್ಷಗಳ ಕಾಲ ಇವನ ಉಪನ್ಯಾಸ ಮಾಲೆಗೆ ಧಕ್ಕೆ ಒದಗಿತ್ತು. ಮುಂದೆ ಪ್ರಮುಖ ವಿಜ್ಞಾನಿಗಳೆಂದು ಖ್ಯಾತರಾದ ಅನೇಕರು ಕಾಲೇಜ್ ಡಿ ಫ್ರಾನ್ಸಿನಲ್ಲಿ ಬರ್ನಾರನ ಶಿಷ್ಯರಾಗಿದ್ದರು. ಪಾಲ್ ಬರ್ಟ್ ಅಲ್ಬರ್ಟ್, ಡಾಸ್ಟರ್, ಡಿ ಆರ್ಸನ್‍ವಾಲ್, ಮೋರೋ ಮುಂತಾದ ಫ್ರಂಚರು ಕೂಹ್ ಹಾಗೂ ರೋಸೆನ್‍ಥಾಲ್ (ಜರ್ಮನಿ), ಡಿ ಸಿಯಾನ್ ಮತ್ತು ಸೆಚಿನೊವ್ (ರಷ್ಯ), ಮಾಸ್ಸೊ ಮತ್ತು ವೆಲ್ಲ ಇಟಲಿ) ಪ್ಯಾನಮ್ (ಡೆನ್‍ಮಾರ್ಕ್), ಬಾಲ್ ಮತ್ತು ಪೇವಿ (ಇಂಗ್ಲೆಂಡ್), ಆಸ್ಟಿನ್‍ಫ್ಲಿಂಟ್, ಮಿಚೆಲ್ (ಅಮೆರಿಕ) ಇವರು ಇಂಥ ಕೆಲವರು, ಬರ್ನಾರನ ಉಪನ್ಯಾಸಗಳನ್ನು ಕೇಳಲು ಲೂಯಿ ಪಾಸ್ತರ್, ರ್ಯಾನ್‍ವಿಯರ್ ಮುಂತಾದವರಲ್ಲದೆ ಬ್ರೆಜಿಲಿನ ಚಕ್ರವರ್ತಿ ಎರಡನೆಯ ಪೀಡ್ರೊ ಕೂಡ ಬರುತ್ತಿದ್ದ. ಇವರ ಪೈಕಿ ಬರ್ನಾರನ ಅತ್ಯಂತ ನಿಧೇಯ ಶಿಷ್ಯರೆನ್ನಿಸಿದ ಪಾಲ್ ಬರ್ಟ್‍ನನ್ನು ಸಾರ್ಬನ್ನಿನಲ್ಲಿ ಶರೀರಕ್ರಿಯಾವಿಜ್ಞಾನದ ಪ್ರಾಧ್ಯಾಪಕನಾಗಿ ಬರ್ನಾರನ ಬದಲು ನೇಮಿಸಲಾಯಿತು. ಫ್ರಾನ್ಸಿನ ಹಿರಿಯ ವಿಜ್ಞಾನಿಗಳಾದ ಬರ್ಥಲಾಟ್, ರೇಯರ್, ಲೂಯಿಪಾಸ್ತರ್, ಡವೆಯ್ನ್, ಡಿವಿಲ್ ಇವರು ಬರ್ನಾರನ ನಿಕಟ ಸ್ನೇಹಿತರೂ ಹಿತೈಷಿಗಳೂ ಆಗಿದ್ದರು.

ಬರ್ನಾರನ ಕೊನೆಕೊನೆಯ ವರ್ಷಗಳಲ್ಲಿ ಇವನಿಗೆ ಇನ್ನೂ ಹೆಚ್ಚಿನ ಗೌರವಗಳು ಲಭಿಸಿದುವು. 1867ರಲ್ಲಿ ಇವನು ಲೀಜಿಯನ್ ಆಫ್ ಆನರಿನ ಅಧಿಕಾರಿಯಾಗಿ ಗೌರವಿಸಲ್ಪಟ್ಟ. ಆ ವರ್ಷವೇ ಸೊಸೈಟಿ ಡಿ ಬಯಾಲಜಿಯ ಅಧ್ಯಕ್ಷನಾದ. 1869ರಲ್ಲಿ ಚಕ್ರವರ್ತಿ ನೆಪೋಲಿಯನ್ III ಇವನನ್ನು ವಿಧಾನ ಮಂಡಲದ ಸನೇಟರಾಗಿ ನಾಮಕರಣ ಮಾಡಿದ. ಅದೇ ವರ್ಷ ಬರ್ನಾರ್ ಅಕಾಡೆಮಿ ಆಫ್ ಫ್ರಾನ್ಸಿನ ಸದಸ್ಯನಾಗಿಯೂ ಆ ವರ್ಷದ ಕೊನೆ ತಿಂಗಳುಗಳಲ್ಲಿ ಅಕಾಡೆಮಿಯ ಅಧ್ಯಕ್ಷನಾಗಿಯೂ ಚುನಾಯಿತನಾದ, ವಿಜ್ಞಾನಪ್ರಪಂಚದಲ್ಲಿ ಇಷ್ಟು ಔನ್ನತ್ಯವನ್ನೂ ಸರ್ಕಾರದಿಂದ ಅಧಿಕ ಮನ್ನಣೆಯನ್ನೂ ಪಡೆದನಾದರೂ ಆ ಮುಂಚೆಯೇ ಹದಗಟ್ಟಿದ್ದ ಇವನ ಸಾಂಸಾರಿಕ ಸ್ಥಿತಿ ಅದೇ ವೇಳೆಗೆ ಉಲ್ಬಣಿಸಿ ಇವನ ಹೆಂಡತಿ ವಿವಾಹವಿಚ್ಛೇದನ ಪಡೆದು ಮಕ್ಕಳೊಡನೆ ಬೇರೆ ಹೊರಟೇ ಹೋದಳು. ಈ ಪ್ರಸಂಗವೂ ಅದೇ ವರ್ಷದಲ್ಲಿ ಜರ್ಮನಿಯೊಡನೆ ಒದಗಿ ಬಂದ ಯುದ್ಧವೂ ಬರ್ನಾರನ ಮನಸ್ಸಿಗೆ ತೀವ್ರ ಆಘಾತವಾಗಿ ಬಡಿದವು. ಇವನು ವರ್ಷದಲ್ಲಿ ಹೆಚ್ಚು ಹೆಚ್ಚು ಕಾಲ ಸ್ಯಂಟ್‍ಜೂಲಿಯೆನ್ನಿಗೆ ತೆರಳಿ ತನ್ನ ವ್ಯಸನ ಮರೆಯಲು ಪ್ರಯತ್ನಿಸಿದ. ರಷ್ಯದ ಯಹೂದ್ಯ ಪಂಗಡಕ್ಕೆ ಸೇರಿದ ಮೇರಿ ರ್ಯಾಫ್ಯಾಲ್ಲೋವಿಚ್ ಎಂಬಾಕೆಯ ಅಂತಃಕರಣಪೂರಕ ಸಹವಾಸ ದೊರಕಿದ್ದರಿಂದ ಇವನು ವ್ಯಸನ ಸಹಿಸುವಂತಾಯಿತು. ಈಕೆ ಇವನ ಉಪನ್ಯಾಸಗಳಿಗೆ ಹೋಗುತ್ತಿದ್ದಳಲ್ಲದೆ ಇವನಿಗಾಗಿ ಇತರ ಭಾಷೆಗಳಲ್ಲಿಯ ವೈಜ್ಞಾನಿಕ ಕೃತಿಗಳನ್ನು ಭಾಷಾಂತರಿಸಿಯೂ ಕೊಡುತ್ತಿದ್ದಳು. 1877ರ ಮಾಗಿ ಕಾಲದಲ್ಲಿ ಇವನ ಆರೋಗ್ಯ ಪುನಃ ತೀವ್ರವಾಗಿ ಹದಗಟ್ಟಿತು. 1878 ಜನವರಿ 1ರಂದು ಶೀತವಾಗಿ ಇವನ ಮೂತ್ರಪಿಂಡಗಳ ಕ್ರಿಯೆ ಹದಗೆಟ್ಟಿತು. ಹಾಸಿಗೆ ಹತ್ತಿರ ಇವನನ್ನು ಮೇರಿ ರ್ಯಾಫ್ಯಾಲ್ಲೋ ವಿಚ್ಚಳೂ ಅವಳ ಮಗಳೂ ಶ್ರದ್ಧೆಯಿಂದ ಉಪಚರಿಸುತ್ತಿದ್ದರು. ಇವನ ಮನೆಯನ್ನು ಹಿರಿಯ ಮಗಳು ಟೋನಿ ಪ್ರವೇಶಿಸಲಿಲ್ಲವಾದರೂ ಹೊರಗೇ ಇದ್ದು ವಿಚಾರಿಸಿಕೊಳ್ಳುತ್ತಿದ್ದುದು ವೃದ್ಧ ಬರ್ನಾರನಿಗೆ ಸ್ವಲ್ಪ ಸಮಾಧಾನ ತಂದಿರಬೇಕು. ಕೆಲ ದಿನಗಳಲ್ಲಿ ಮರಣ ಖಂಡಿತ ಎಂದು ಅವನ ಮನಸ್ಸಿಗೂ ಖಾತರಿ ಆದಮೇಲೆ ಬರ್ನಾರನ ಸಹೋದರಿ ಈತ ಪಾಪನಿವೇದನೆ ಮಾಡಿಕೊಳ್ಳುಲು ಪಾದ್ರಿಯನ್ನು ಕರೆತಂದಳಂತೆ. ಆದರೆ ಕೊನೆಗಾಲದಲ್ಲಿ ಇವನ ಮನಸ್ಸು ಈ ರೀತಿ ದೈವಿಕದೆಡೆಗೆ ಸಾಗುವುದು ಅನುಮಾನ ಎಂದೇ ಇವನ ನಿಕಟವರ್ತಿಗಳ ಅಭಿಪ್ರಾಯ. 1878 ಫೆಬ್ರುವರಿ 10ರಂದು ಬರ್ನಾರ್ ನಿಧನನಾದ. ಇವನ ಶವಸಂಸ್ಕಾರ ವಿಜೃಂಭಣೆಯಾಗಿ ರಾಷ್ಟ್ರೀಯ ಮಟ್ಟದಲ್ಲಿ ಜರುಗಿತು. ಫ್ರಾನ್ಸಿನಲ್ಲಿ ವಿಜ್ಞಾನಿಯಾದವನೊಬ್ಬನ ಶವಸಂಸ್ಕಾರ ರಾಷ್ಟ್ರೀಯ ಮಟ್ಟದಲ್ಲಿ ನಡೆದದ್ದು ಅದೇ ಮೊದಲು. ಅಲ್ಲಿಯ ತನಕ ಇಂಥ ಮರ್ಯಾದೆ ಉನ್ನತ ಸೈನ್ಯಾಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ಮಾತ್ರ ಮೀಸಲಾಗಿತ್ತು.

ಬರ್ನಾರ್ ನಿಧನನಾದ ಮೇಲೆ ಇವನ ಸ್ವಂತ ಕಾಗದ ಪತ್ರಗಳನ್ನಿಟ್ಟಿದ್ದ ಪೆಟ್ಟಿಗೆಯನ್ನು ಶೋಧನೆ ಮಾಡಿದಾಗ ಅವುಗಳೊಡನೆ ವೈಜ್ಞಾನಿಕ ವಿಚಾರಗಳನ್ನು ಗುರುತು ಹಾಕಿಟ್ಟಿದ್ದ ಪತ್ರಗಳೂ ಸಿಕಿದುವು. ಇವನ್ನು ಮಂದೆ ಬರ್ಥೆಲಾಟ್ ಪ್ರಕಟಿಸಿದ. ಸಕ್ಕೆರೆ ಮತ್ತು ಷಿಷ್ಟಪದಾರ್ಥಗಳಿಂದ ಮದ್ಯಸಾರ ಉತ್ಪತ್ತಿಗೆ ಕಾರಣವಾದ ವಸ್ತುವಿನ ಸಂಬಂಧಪಟ್ಟವು ಈ ಟಪ್ಪಣಿಗಳು. ಮದ್ಯತಯಾರಿಕೆ, ಪಿಷ್ಟ ಇಲ್ಲವೆ ಶರ್ಕರಯುಕ್ತ ದ್ರವಗಳು ಹಳಸುವುದು ಮತ್ತು ಹುಳಿಬರುವುದು-ಇಂಥ ಸಂದರ್ಭಗಳಲ್ಲಿ ಜರಗುವ ರಾಸಾಯನಿಕ ಕ್ರಿಯೆಗಳು ಯೀಸ್ಟ್ ಮತ್ತು ವಿವಿಧ ಬ್ಯಾಕ್ಟೀರಿಯಗಳ ಜೈವಿಕ ಕ್ರಿಯೆಯ ಪರಿಣಾಮ ಎಂದು ಲೂಯಿ ಪಾಸ್ತರ್ ತನ್ನ ಅದ್ಭುತ ಪ್ರಯೋಗಗಳಿಂದ ರುಜುವಾತು ಮಾಡಿದನಷ್ಟೆ. ಪಾಸ್ತರನ ಅನೇಕ ಪ್ರಯೋಗಗಳು ದೋಷಯುಕ್ತವಾಗಿದ್ದು ಅವೇ ಪ್ರಯೋಗಗಳನ್ನು ದೋಷರಹಿತವಾಗಿ ಮಾಡಿದರೆ ವ್ಯತಿರಿಕ್ತ ಫಲಿತಾಂಶಗಳು ಕಂಡುಬರುವುದು ಖಂಡಿತ ಎಂಬ ಬರ್ನಾರನ ನಿಲವು ಹಾಗೂ ಮದ್ಯತಯಾರಿಕೆಯಲ್ಲಿ ಮತ್ತು ಶರ್ಕರಪದಾರ್ಥಗಳನ್ನು ಹುಳಿ ಬರಿಸುವಲ್ಲಿಯ ರಾಸಾಯನಿಕ ಕ್ರಿಯೆಗಳಿಗೆ ಜೀವಿಗಳ ಅಗತ್ಯವಿಲ್ಲ, ಅರ್ಥಾತ್ ಅವು ಜೈವಿಕಕ್ರಿಯೆಗಳ ಪರಿಣಾಮವಲ್ಲ ಎಂದು ತೋರಿಸುವುದಕ್ಕೆ ಅವಶ್ಯಕವಾದ ಪ್ರಯೋಗಗಳ ಕರಡು ಯೋಜನೆ ಈ ಪತ್ರಗಳಿಂದ ತಿಳಿದು ಬಂದುವು. ಹುದುಗಿನ ಬಗ್ಗೆ ಪಾಸ್ತರ್ ತಪ್ಪುದಾರಿಯಲ್ಲಿ ಮುಂದುವರಿಯುತ್ತಿದ್ದಾನೆ ಎಂದು ಬರ್ನಾರ್ ಸ್ನೇಹಿತರಿಗೆ ತನ್ನ ಅಂತ್ಯದಿನಗಳಲ್ಲಿ ತಿಳಿಸಿದ್ದ. ಪತ್ರಗಳ ಪ್ರಕಟಣೆ ಆದಮೇಲೆ ತನ್ನ ಪ್ರಯೋಗ ನಿರ್ಣಯಗಳನ್ನು ಖಂಡಿಸುವುದಕ್ಕಾಗಿಯೇ ಬರ್ನಾರ್ ಬೇರೆ ಪ್ರಯೋಗಗಳ ಯೋಜನೆ ಹಾಕಿಟ್ಟುಕೊಂಡಿದ್ದ ವಿಷಯ ಪಾಸ್ತರನಿಗೂ ತಿಳಿಯಿತು. ಆದರೂ ಅವನು ಬರ್ನಾರನಲ್ಲಿ ಇಟ್ಟಿದ್ದ ವಿಶ್ವಾಸ ಗೌರವಗಳಿಂದ ವಿಚಲಿತನಾಗಲಿಲ್ಲ. ಪತ್ರದಲ್ಲಿಯ ಟಪ್ಪಣಿ ಇನ್ನೂ ಪಕ್ವಗೊಳಿಸದೆ ಇದ್ದ ವಿಚಾರಸರಣಿ ಇರಬೇಕು, ಆದ್ದರಿಂದಲೇ ಬರ್ನಾರ್ ಅದನ್ನು ಮುಚ್ಚಿಟ್ಟಿದ್ದ ಅಲ್ಲದೆ, ಸ್ವತಃ ತನ್ನೊಡನೆಯಾಗಲಿ ಬೇರೆಯವರಲ್ಲಿಯಾಗಲಿ ಈ ಬಗ್ಗೆ ಪ್ರಸ್ತಾವಿಸಿರಲಿಲ್ಲ ಎಂದು ಪಾಸ್ತರ್ ಅರ್ಥಮಾಡಿಕೊಂಡ. ತಾನು ಮಂಡಿಸಿದ ಸಿದ್ಧಾಂತವನ್ನು ಖಂಡಿಸುವುದು ಈ ಅಪಕ್ವ ವಿಚಾರಸರಣಿ ಮಾತ್ರವಾದ್ದರಿಂದ ಇದರ ವಿಷಯವಾಗಿ ಟೀಕಿಸಿ ಮತ್ತು ತನ್ನ ಸ್ವಂತ ಸಿದ್ಧಾಂತವನ್ನು ಸಮರ್ಥಿಸಿ ಒಂದು ಪ್ರಬಂಧ ಬರೆಯುವುದಕ್ಕಿಂತ ಹೆಚ್ಚಾಗಿ ಮನಸ್ಸು ಕೆಡಿಸಿಕೊಳ್ಳುವುದು ಅನುಚಿತ ಎಂದು ಸಮಾಧಾನ ತಂದುಕೊಂಡ. ಮುಂದೆ ವಿಶದೀಕರಣವಾದಂತೆ ಈ ವಿಷಯದಲ್ಲಿ ಬರ್ನಾರ್ ಮತ್ತು ಪಾಸ್ತರ್ ಇಬ್ಬರೂ ಅರ್ಧ ಸರಿ, ಅರ್ಧ ತಪ್ಪಾಗಿದ್ದರು. ಇಂದು ತಿಳಿದಂತೆ ಶರ್ಕರ ಪಿಷ್ಟಾದಿಗಳು ಮದ್ಯವಾಗಿ ಇಲ್ಲವೇ ಯಾವುದಾದರೂ ಆಗ್ರ್ಯಾನಿಕ್ ಆಮ್ಲವಾಗಿ ರಾಸಾಯನಿಕ ಬದಲಾವಣೆಗೊಳ್ಳುವುದು ಕಿಣ್ವಗಳ ಕಾರ್ಯಕ್ರಮದಿಂದ. ಈ ಕಿಣ್ವಗಳು ಜೀವಿಯ ಕೋಶದ ಒಳಗೆ ಇದ್ದು ಕ್ರಿಯಾಗತವಾಗಬಹುದು ಅಥವಾ ಕೋಶದಿಂದ ಹೊರಬಂದ ಒಂದು ರಾಸಾಯನಿಕವಾಗಿ ಕ್ರಿಯೆಯಲ್ಲಿ ಪಾಲುಗೊಳ್ಳಬಹುದು. ಆದ್ದರಿಂದ ಮದ್ಯತಯಾರಿಕೆ ಇತ್ಯಾದಿ ಕೈಗಾರಿಕೆಗಳು ಯೀಸ್ಟ್, ಬ್ಯಾಕ್ಟೀರಿಯಾಗಳ ಜೈವಿಕ ಕ್ರಿಯೆಯನ್ನೇ ಅವಲಂಬಿಸಿರಬೇಕಾಗಿಲ್ಲ. ಆದರೆ ಜೀವಿಗಳಿಂದಲೇ ಉತ್ಪನ್ನವಾಗುವ ಕಿಣ್ವಗಳನ್ನು ಪ್ರತ್ಯೇಕಿಸಿ ಶುದ್ಧಗೊಳಿಸಿ ಬಳಸಬೇಕಾಗುತ್ತದೆ.
(ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ